ಕನ್ನಡ ಪ್ರಪಂಚ  

       ಕನ್ನಡ ಪ್ರಪಂಚ ಈ ವೆಬ್‌ಸೈಟ್ ನಿರ್ಮಿಸಿರುವುದು ದಾವಣಗೆರೆಯ ಗ್ರಂಥಸರಸ್ವತಿ ಪ್ರಕಾಶನ ಸಂಸ್ಥೆ. ಕನ್ನಡನುಡಿ ತೂಗುಪಂಚಾಗವನ್ನು ೨೦೦೪ ರಲ್ಲಿ ಕಪ್ಪು ಬಿಳುಪು ಬಣ್ಣಗಳಲ್ಲಿ ಮುದ್ರಿಸಿ ಪ್ರಕಟಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಪಾದಾರ್ಪಣೆ ಮಾಡಿತು ಈ ಗ್ರಂಥಸರಸ್ವತಿ.
        ಅನೇಕ ಕಷ್ಟ-ನಷ್ಟ, ಅವಮಾನ-ಆತಂಕಗಳನ್ನು ಎದುರಿಸುತ್ತಾ ಬರುತ್ತಲೇ ಇದೀಗ ಏಳನೆಯ ವಸಂತಕ್ಕೆ ತನ್ನ ಅಂಬೆಗಾಲಿಡುತ್ತಿದ್ದಾಳೆ ಈ ಕನ್ನಡ ಕುವರಿ.ತಾನು ಉಂಡು ಅನುಭವಿಸಿದ ನೋವು ಮರೆತು ಕನ್ನಡ ಕಸ್ತೂರಿಯ ನಲಿವು ಹರಡುವ ಸೇವಾ ಕೈಂಕರ್ಯ ಇದರದು. ತನ್ನ ಎರಡನೇ ವರ್ಷಕ್ಕೇ ಆಕರ್ಷಕ ಬಣ್ಣಗಳಲ್ಲಿ ಹೊರಬಂದ ಕನ್ನಡನುಡಿ ಕ್ಯಾಲೆಂಡರ್ ಅಭಿಮಾನಿಗಳ ಪ್ರೀತಿ ಸಂಪಾದಿಸಿದೆ.
       ಇದರ ಮೌಲ್ಯ ಅರಿತು ಆಕರ್ಷಕರಾಗಿರುವ ಅನೇಕ ಉದ್ಯಮಿಗಳು-ಸಂಸ್ಥೆಗಳು ತಮ್ಮ ಜಾಹೀರಾತು ನೀಡಿ ಧನಸಹಾಯ ನೀಡುವ ಮೂಲಕ ಪ್ರೋತ್ಸಾಹಿಸುತ್ತಿದ್ದು. ಕನ್ನಡ ಕೆಲಸಕ್ಕೆ ಟೊಂಕ ಕಟ್ಟಿ ನಿಲ್ಲಲು ಆನೆಬಲ ಬಂದಂತಾಗಿದೆ.
       ಈ ಎಲ್ಲಾ ಪೋಷಕರಿಗೂ ಗ್ರಂಥಸರಸ್ವತಿಯ ಕೃತಜ್ಞತೆಗಳು. ಒಳ್ಳೆಯದನ್ನು ನಿರ್ಮಿಸಬಹುದು ಆದರೆ ಅದನ್ನು ಬೆಲೆ ಕೊಟ್ಟು ಕೊಂಡು ಹರಸುವವರು ಬೇಕಲ್ಲಾ ? ನಮ್ಮ ಈ ಚೊಚ್ಚಲು ಕೂಸು ಕನ್ನಡನುಡಿಯನ್ನು ಪ್ರೀತಿ ಮಮತೆಯಿಂದ ಈವರೆಗೂ ತಮ್ಮ ಮನೆಗೆ ಬರಮಾಡಿಕೊಂಡ ಎಲ್ಲಾ ವಿದ್ಯಾರ್ಥಿ ವೃಂದ, ಶಿಕ್ಷಕವೃಂದ ಹಾಗೂ ಪೋಷಕವೃಂದಕ್ಕೂ ವಂದನೆಗಳನ್ನು ಅರ್ಪಿಸುತ್ತೇವೆ.
        ಗ್ರಂಥಸರಸ್ವತಿಯ ಎರಡನೆಯ ಕೃತಿ ಪ್ರಪಂಚ ದರ್ಶಿನಿ ಇದನ್ನು ೨೦೦೬ ರಲ್ಲಿ ಸಿದ್ದಗೊಳಿಸಿ ಸಾಣೇಹಳ್ಳಿಯ ಶ್ರೀ ತರಳಬಾಳು ಜಗದ್ಗುರು ಶಾಖಾ ಮಠದ ಪಟ್ಟಾಧ್ಯಕ್ಷರಾದ ಪೂಜ್ಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರ ಪಾದಾರವಿಂದಗಳಿಗೆ ಮುಡಿಸಿದಾಗ ಅದನ್ನು ಅವರು ಎತ್ತಿಕೊಂಡು ಖ್ಯಾತ ರಂಗಕರ್ಮಿ ದಿವಂಗತ ಸಿ.ಜಿ. ಕೃಷ್ಣಸ್ವಾಮಿಯರ ಸಲಹೆಯಂತೆ ಶಿವಸಂಚಾರ ರಂಗ ಶಿಕ್ಷಣ ಶಾಲೆಯ ಆರ್ಥಿಕ ಸಹಕಾರ ನೀಡಿ ಪ್ರಕಟಿಸಲು ಪ್ರೋತ್ಸಾಹಿಸಿ ಹರಸಿದರು. ಆನಂತರದ ವರ್ಷಗಳಿಂದ ಈಚೆಗೆ ಪ್ರಪಂಚ ದರ್ಶಿನಿಯನ್ನು ಪ್ರಕಟಿಸಲು ಸಾಧ್ಯವಾಗದೆ ಚಡಪಡಿಸುತ್ತಿದ್ದೇವೆ. ಆದರೂ ದಾನಿಗಳ ನಿರೀಕ್ಷೆಯಲ್ಲಿ ಮುನ್ನಡೆಯುತ್ತಿದ್ದೇವೆ.
     ಕನ್ನಡನುಡಿಯನ್ನು ಹಿಂದಿನ ವರ್ಷ (೨೦೦೮) ಪ್ರಕಟಿಸುವುದೂ ಅಷ್ಟೆ ಕಷ್ಟವಾಗಿ ಪೂರ್ಣ ಅಸಹಾಯಕರಾಗಿ ಕೈಚೆಲ್ಲಿ ಕುಳಿತೆವು. ಧರ್ಮ ಕಾರ್ಯಗಳಿಗೆ ಯಾವತ್ತೂ ಅಭಯ ಹಸ್ತ ನೀಡುವ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯನೀಯ ಡಾ|| ಡಿ. ವೀರೇಂದ್ರ ಹೆಗಡೆಯವರು ನೆನಪಾದರು. ಅವರ ಬಳಿ ಕನ್ನಡ ನುಡಿಯ ಹಳೆಯ ಪ್ರತಿಗಳನ್ನು ಹಾಗೂ ಪತ್ರಿಕೆಗಳಲ್ಲಿ ಬಂದಿದ್ದ ಲೇಖನಗಳನ್ನು ಹೊಯ್ದು ತೋರಿಸಿ ನಮಗೆ ಮಾರ್ಗದರ್ಶನ ನೀಡಲು ವಿನಂತಿಸಿಕೊಂಡೆವು. ಆಗ ಅವರು ಮನಸಾರೆ ಮೆಚ್ಚಿ ಪ್ರಶಂಸಿಸಿ ಪ್ರೋತ್ಸಾಹಿಸಿ ಧನ ಸಹಾಯ ಮಾಡಿದರು. ಈ ಕ್ಯಾಲೆಂಡರ್ ತುಂಬಾ ಅಪರೂಪದ್ದು, ಶೈಕ್ಷಣಿಕ ಮೌಲ್ಯ ಉಳ್ಳದ್ದು, ಇದು ಎಲ್ಲಾ ಕನ್ನಡಿಗರ ಮನೆ ತಲುಪುವಂತಾಗಲಿ ಎಂದು ಹಾರೈಸಿದರು.
       ಅವರ ಕೃಪೆ ದೊರೆತದ್ದೇ ತಡ ಬೆಟ್ಟದೋಪಾದಿ ಎದುರು ನಿಂತಿದ್ದ ಸಮಸ್ಯೆ ಹೂವು ಎಕ್ಕಿದಷ್ಟು ಸುಲಭವಾಯಿತು. ಧರ್ಮಸ್ಥಳದಿಂದ ಮೂಡಬಿದಿರೆಗೆ ಹೋಗಿ ಅಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ|| ಮೋಹನ ಆಳ್ವಾರವರನ್ನು ಕಂಡಾಗ ಅವರೂ ಜಾಹಿರಾತು ನೀಡಿ ಶುಭ ಹಾರೈಸಿದರು. ದಾವಣಗೆರೆಯ ಬಾಪೂಜಿ ವಿದ್ಯಾಸಂಸ್ಥೆಯ ಎಸ್.ಎಸ್. ಗಣೇಶರವರು, ದಾವಣಗೆರೆ ಮೈಕ್ರೋಲೈನ್ ಸಂಸ್ಥೆಯ ವಾಜಿದರವರು, ಬೆಂಗಳೂರು ಕುಬೇರನ್ ಸಿಲ್ಕ್ಸ್‌ನ ವೆಂಕಟಶ್‌ರವರ ಹತ್ತಿರ ಹೋಗಿ ವಿಚಾರಿಸಿದಾಗ ಅವರೆಲ್ಲರೂ ಸಂತೋಷದಿಂದ ಜಾಹಿರಾತೂ ನೀಡಲು ಒಪ್ಪಿ ನೆರವಿತ್ತರು. ಇವರೆಲ್ಲರ ಕೊಡುಗೈ ದಾನಕ್ಕೆ ಗ್ರಂಥಸರಸ್ವತಿ ಅತ್ಯಂತ ನಮ್ರತೆಯಿಂದ ಕೃತಜ್ಞತೆ ಸಲ್ಲಿಸುತ್ತದೆ.
       ಈ ಬಾರಿ (೨೦೦೯) ಕನ್ನಡನುಡಿ ತೂಗುಪಂಚಾಂಗವೂ ಅಪಾರ ಮನ್ನಣೆ-ಪ್ರಶಂಸೆಯನ್ನು ದೂರದರ್ಶನ ಹಾಗೂ ಪತ್ರಿಕೆಗಳಿಂದ ಮತ್ತು ಕನ್ನಡ ಅಭಿಮಾನಿ ವೃಂದದಿಂದ ಪಡೆಯಿತು. ಗ್ರಂಥಸರಸ್ವತಿಯು ೨೦೧೦ರ ಕನ್ನಡನುಡಿ ಹಾಗೂ ಪ್ರಪಂಚ ದರ್ಶಿನಿ ಎರಡನ್ನೂ ತನ್ನ ಹೆಗಲ ಮೇಲೆ ಹೊತ್ತು ಬರಲಿದೆ. ಇದರ ಕೈ ಹಿಡಿದು ನಡೆಸುವ ಸಹೃದಯಿಗಳ ನೆರವು-ಸಹಕಾರ ಅತ್ಯಗತ್ಯವಾಗಿದೆ.
     ಕನ್ನಡನುಡಿ ಹಾಗೂ ಪ್ರಪಂಚ ದರ್ಶಿನಿ ಎರಡನ್ನೂ ಒಂದಾಗಿಸಿ ನಡೆಸುತ್ತ ತನ್ನ ಕನಸುಗಳನ್ನು ಜಗದಗಲ ಹರಡುವ ಸಾಹಸಕ್ಕಿಳಿದಿರುವ ಗ್ರಂಥಸರಸ್ವತಿಯು ಕನ್ನಡ ಪ್ರಪಂಚ ಎಂಬ ವಿನೂತನ ವಿಶ್ವಜಾಲವನ್ನು (website) ನಿರ್ಮಿಸಿದೆ. ಇದರ ಮೂಲಕ ಈ ಹಿಂದೆ ಪ್ರಕಟವಾದ ಎರಡೂ ಕ್ಯಾಲೆಂಡರ್‌ಗಳ ಎಲ್ಲಾ ಪುಟಗಳನ್ನು ಸಹೃದಯಿಗಳ ಮುಂದಿಡಲಿದ್ದೇವೆ.
        ವಿಶ್ವದ ಮೂಲೆ ಮೂಲೆಯಲ್ಲಿರುವ ಕನ್ನಡಿಗರ ಮನೆ-ಮನದ ಬಾಗಿಲು ತಟ್ಟಲಿರುವ ಈ ನಮ್ಮ ಪ್ರಯತ್ನಕ್ಕೆ ನಿಮ್ಮೆಲ್ಲರ ಸ್ಪಂದನೆ ಮಾರ್ಗದರ್ಶನ ಪ್ರೋತ್ಸಾಹವನ್ನು ಬೇಡುತ್ತೇವೆ.ಮನೆಯಲ್ಲೇ ಕೂತು ನಾಡು-ದೇಶ-ವಿಶ್ವದ ಮಾಹಿತಿಯನ್ನು ಪಡೆಯಲು ಅನುಕೂಲವಾಗುವಂತೆ ಈ ವಿಶ್ವಜಾಲ ಸಂಪರ್ಕ ಕಲ್ಪಿಸಿದ್ದೇವೆ.
       ಹೊರನಾಡು- ಹೊರದೇಶದಲ್ಲಿರುವ ಕನ್ನಡ ಕಣ್ಮಣಿಗಳು ನಮ್ಮ ನಾಡಿನ ವಿದ್ಯಾರ್ಥಿಗಳು-
ಬೋಧಕರು ಹಾಗೂ ಪೋಷಕರೊಂದಿಗೆ ಶೈಕ್ಷಣಿಕ, ಸಾಂಸ್ಕೃತಿಕ ಕೊಡು-ಕೊಳ್ಳುವಿಕೆಯ ಸಂಪರ್ಕ ಬೆಸೆಯಲೆಂಬುದು ನಮ್ಮ ಸದಾಶಯವಾಗಿದೆ.ಉದ್ಯಮಶೀಲ ದಾನಿಗಳು ಜಾಹಿರಾತು ನೀಡುವ ಮೂಲಕ ಹಾಗೂ ಕ್ರೀಯಾಶೀಲಾ ವಿದ್ಯಾಸಂಪನ್ನ ಕನ್ನಡ ಅಭಿಮಾನಿಗಳು ಈ ಕ್ಯಾಲೆಂಡರ್‌ಗಳನ್ನು ಕೊಂಡುಕೊಳ್ಳುವ ಮೂಲಕ ಪ್ರೋತ್ಸಾಹಿಸಲು ವಿನಂತಿ. ತಮ್ಮನ್ನು ಸಂಪರ್ಕಿಸುವ ನಿತ್ಯ ಕಾತುರದಲ್ಲಿರುವ ಇಂತಿ ತಮ್ಮ ಪ್ರೀತಿಯ ಗ್ರಂಥಸರಸ್ವತಿ.
 

 

ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಕನ್ನಡಪ್ರಪಂಚ.ಇನ್                                      Copyright @ kannadaprapancha.in, All rights reserved